ಬೇಲ
ರೂಟೇಸೀ ಕುಟುಂಬಕ್ಕೆ ಸೇರಿದ ಪರ್ಣಪಾತಿ ವನ್ಯವೃಕ್ಷ (ಎಲಿಫೆಂಟ್ ಆಪಲ್, ವುಡ್ ಆಪಲ್). ರುಚಿಯಾದ ಹಣ್ಣನ್ನು ಕೊಡುವುದರಿಂದ ಇದನ್ನು ಬೆಳೆಸುವುದೂ ಉಂಟು. ಫೆರೋನಿಯ ಲಿಮೋನಿಯ ಅಥವಾ ಫೆರೋನಿಯ ಎಲಿಫ್ಯಾಂಟಮ್ ಇದರ ಸಸ್ಯ ವೈಜ್ಞಾನಿಕ ಹೆಸರು.

ಭಾರತವೇ ಇದರ ತವರು ಎನ್ನಲಾಗಿದೆ. ಶ್ರೀಲಂಕಾ, ಜಾವ ಮುಂತಾದೆಡೆಗಳಲ್ಲೂ ಕಾಣದೊರೆಯುತ್ತದೆ. ಭಾರತಾದ್ಯಂತ ಪಶ್ಚಿಮ ಹಿಮಾಲಯದಿಂದ ಹಿಡಿದು ದಕ್ಷಿಣ ಭಾರತದ ತುದಿಯವರೆಗೂ ಇದರ ವ್ಯಾಪ್ತಿ ಉಂಟು.

ಇದು 10-15ಮೀ ಎತ್ತರಕ್ಕೆ ಬೆಳೆಯುವ ಸಾಧಾರಣ ಗಾತ್ರದ ಮರ. ಬುಡದ ಸುತ್ತಳತೆ ಸುಮಾರು 1ಮೀ. ರೆಂಬೆಗಳ ಮೇಲೆಲ್ಲ ಮುಳ್ಳುಗಳುಂಟು. ಎಲೆಗಳು ಸಂಯುಕ್ತ ಬಗೆಯವು. ಪ್ರತಿ ಎಲೆಯಲ್ಲಿ ಅಂಡಾಕಾರದ 6-7 ಕಿರಿಯ ಎಲೆಗಳಿವೆ. ಹೂಗಳು ಸಣ್ಣ ಗಾತ್ರದವು, ಪ್ಯಾನಿಕಲ್ ಮಂಜರಿಗಳಲ್ಲಿ ಸಮಾವೇಶಗೊಂಡಿವೆ. ಫಲ ಗುಂಡನೆಯ ಆಕಾರದ್ದು; ಇದರ ವ್ಯಾಸ ಸುಮಾರು 2.5-6 ಸೆಂಮೀ. ಫಲದ ಚಿಪ್ಪು ಗಡಸು ಒರಟು ಮತ್ತು ದಾರುಮಯ. ಒಳಗೆ ಮೃದುವಾದ ಸಿಹಿಯಾದ, ನವುರಾದ ಸುವಾಸನೆಯುಳ್ಳ ಖಾದ್ಯಯೋಗ್ಯ ತಿರುಳಿದೆ. ಇದರೊಳಗೆ ಹುದುಗಿದಂತೆ ಚಿಕ್ಕಗಾತ್ರದ ಚಪ್ಪಟೆಯಾದ ಅಸಂಖ್ಯ ಬೀಜಗಳುಂಟು. ಕಾಯಿಗಳು ಮಾಗುವುದು ನವೆಂಬರ್-ಮಾರ್ಚ್ ಅವಧಿಯಲ್ಲಿ.

ಫಲದ ತಿರುಳಿನಲ್ಲಿ 69.5% ತೇವಾಂಶ, 7.3% ಪ್ರೋಟೀನ್, 1.9% ಖನಿಜಾಂಶ, 15.5% ಕಾರ್ಬೊಹೈಡ್ರೇಟ್, 0.13% ಕ್ಯಾಲ್ಸಿಯಮ್, 0.11% ರಂಜಕ, 3.5% ಪೆಕ್ಟಿನ್ ಇತ್ಯಾದಿಗಳಿವೆ. ಇದು ಶಕ್ತಿವರ್ಧಕ, ಚೇತೋಹಾರಿ, ಬಂಧಕ, ಹೃದಯೋತ್ತೇಜಕ, ತಂಪುಕಾರಕ ಎಂದು ಹೆಸರಾಗಿದೆ. ತಿರುಳನ್ನು ನೇರವಾಗಿ ಇಲ್ಲವೆ ಬೆಲ್ಲ ಅಥವಾ ಸಕ್ಕರೆಯೊಂದಿಗೆ ಸೇರಿಸಿ ಸೇವಿಸುವುದಿದೆ. ಇದರಿಂದ ತಯಾರಿಸುವ ಪಾನಕ ಜನಪ್ರಿಯ ಪಾನೀಯಗಳ ಪೈಕಿ ಒಂದು. ಅತಿಸಾರ, ಆಮಶಂಕೆಗಳ ಚಿಕಿತ್ಸೆಯಲ್ಲಿ ಇದು ಉಪಯುಕ್ತ.

	ಬೇಲದ ಕಾಂಡ, ರೆಂಬೆಗಳಿಂದ ಲಭಿಸುವ ಗೋಂದು ಜಾಲಿ ಅಂಟಿನಂತೆಯೇ ಉತ್ತಮ ದರ್ಜೆಯದೆನಿಸಿದೆ. ಬೇಲದ ಸೊಪ್ಪು ದನಗಳಿಗೆ ಮೇವು. ಚೌಬೀನೆ ಹಲವಾರು ಬಗೆಗಳಲ್ಲಿ ಬಳಕೆಯಾಗುತ್ತದೆ.
(ಎಂ.ಎಚ್.ಎಂ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ